ಭಾರತ ಪರ್ಯಾಯ ದ್ವೀಪೋತ್ತರ ಭಾಗ -
ಉತ್ತರದಲ್ಲಿ ಹಿಮಾಲಯ ಪರ್ವತಗಳನ್ನೂ ಪಶ್ಚಿಮದಲ್ಲಿ ಆಫ್ಘಾನಿಸ್ತಾನದ ಮತ್ತು ಬಲೂಚಿಸ್ತಾನದ ಪರ್ವತಗಳನ್ನೂ ಪೂರ್ವದಲ್ಲಿ ಬರ್ಮದ ಪರ್ವತಗಳನ್ನೂ ಒಳಗೊಂಡಿರುವ ಪ್ರದೇಶ ಎಕ್‍ಸ್ಟ್ರಾಪೆನಿನ್ಸ್ಯುಲರ್ ಇಂಡಿಯಾ. ಈ ಬೌಗೋಳಿಕ ವಿಂಗಡಣೆ ನಾಡಿನ ಮೇಲ್ಮೈಲಕ್ಷಣ, ಶಿಲಾಚರಿತ್ರೆ ಮತ್ತು ಶಿಲಾರಚನೆ ಇವನ್ನು ಆಧರಿಸಿ ಆಗಿರುವಂಥದು.

	ಮೇಲ್ಮೈಲಕ್ಷಣ: ಪರ್ವತಗಳು, ನದಿಗಳು, ನೀರ್ಗಲ್ಲು ನದಿಗಳು, ಸರೋವರಗಳು ಮತ್ತು ಭೂಕಂಪನಗಳು ಇಲ್ಲಿಯ ಮುಖ್ಯ ಮೇಲ್ಮೈಲಕ್ಷಣಗಳು.

	ಪರ್ವತಗಳು: ಇಲ್ಲಿಯ ಪರ್ವತಗಳು ಪ್ರಪಂಚದ ಅತ್ಯುನ್ನತ ಪರ್ವತಶ್ರೇಣಿ ಪಂಕ್ತಿಗೆ ಸೇರಿವೆ. ಇವೆಲ್ಲ ಮುದುಡಿ, ಮಡಚಿರುವ ಶಿಲಾಸ್ತರಗಳಿಂದ ಆಗಿವೆ. ಈ ಪರ್ವತಶ್ರೇಣಿಗಳಲ್ಲಿ ಪರ್ಯಾಯದ್ವೀಪದ ಕಡೆ ಹೊರಬಾಗಿರುವ ಕಮಾನುರಚನೆ ಪ್ರಮುಖ. ಇವುಗಳಲ್ಲಿ ಕಾಶ್ಮೀರದಿಂದ ಅಸ್ಸಾಮಿನವರೆಗೆ ಹಬ್ಬಿರುವ ಭಾಗವೇ ಅತ್ಯಂತ ದೊಡ್ಡದು. ವಿಸ್ತಾರ 2400 ಚಕಿಮೀ. ಇದರ ಪಶ್ಚಿಮಕ್ಕಿರುವ ಹಾಗೂ ಸಫೇದ್ ಖೋಹ್, ಸುಲೇಮಾನ್, ಕೀರ್ತಾರ್ ಮತ್ತು ಮೇಕ್ರಾನ್ ಶ್ರೇಣಿಗಳನ್ನು ಒಳಗೊಂಡ ಭಾಗ ಚಿಕ್ಕ ಚಿಕ್ಕ ತ್ರಿಜ್ಯಗಳುಳ್ಳ ಭಾಗಗಳಿಂದಾಗಿದೆ.

	ಹಿಮಾಲಯ ಪ್ರದೇಶವನ್ನು ಉದ್ದುದ್ದವಾಗಿ ಸಮಾಂತರವಾಗಿರುವ ಭಾಗಗಳಾಗಿ ವಿಂಗಡಿಸಬಹುದು. ಸಿವಾಲಿಕ್ ಪಾದಬೆಟ್ಟಗಳು, ಕೆಳಹಿಮಾಲಯಭಾಗ ಮಹಾಹಿಮಾಲಯ ಭಾಗ, ಹೊರಹಿಮಾಲಯ ಭಾಗ ಅಥವಾ ಟಿಬೆಟ್ ಹಿಮಾಲಯ.

	ಸಿವಾಲಿಕ್ ಪಾದಬೆಟ್ಟಗಳು ಭೂಚರಿತ್ರೆಯ ನವಜೀವಿಕಲ್ಪದಲ್ಲಿ (ಸೀನೊಯಿಕ್) ಸಂಚಯಿಸಿದ ಶಿಲೆಗಳಿಂದಾಗಿದ್ದು ಗಂಗಾ, ಸಿಂಧೂ ಮೆಕ್ಕಲುಜೊ ಬಯಲಿನೊಂದಿಗೆ ಒಂದುಗೂಡುತ್ತವೆ. ಈ ವಲಯ ಭಾರತದ ಭೂ ಇತಿಹಾಸದಲ್ಲಿ ಇತ್ತೀಚಿಗೆ ಮೇಲೆತ್ತಲ್ಪಟ್ಟ ಭಾಗ. ಸರಾಸರಿ 3031 ಮೀ ಎತ್ತರವಿರುವ ಕೆಳ ಹಿಮಾಲಯ ಪ್ರದೇಶ ನಾಗತಿಬ್ಬ, ದೋಲ್‍ಧಾರ್, ಪೀರ್‍ಪಂಜಾಲ್, ಉತ್ತರ ಕಾಶ್ಮೀರ್ ಮುಂತಾದ ಸಮಾಂತರ ಶ್ರೇಣಿಗಳಿಂದಾಗಿದೆ. ಈ ವಲಯ ಜೀವ್ಯವ ಶೇಷರಹಿತ ಪ್ರೀಕೆಂಬ್ರಿಯನ್ ಮತ್ತು ರ್ಷೇಯಕಲ್ಪದ (ಆರ್ಕೀಯನ್) ಶಿಲಾ ವರ್ಗಗಳಿಂದಾಗಿದೆ. ಮಹಾಹಿಮಾಲಯ ಪ್ರದೇಶ ಆತ್ಯುನ್ನತ ಪ್ರದೇಶ. ಇದರ ಸರಾಸರಿ ಎತ್ತರ 6062 ಮೀ, ಸರಾಸರಿ ಅಗಲ 10 ಕಿಮೀ. ಅಲ್ಲದೆ ಇದು ಎವರೆಸ್ಟ್ (8789 ಮೀ) ಏ2 (8569 ಮೀ) ಕಾಂಚನಗಂಗ, ಧವಳಗಿರಿ, ನಂಗಪ್ರಭಾತ್, ನಚಿದಾದೇವಿ ಮುಂತಾದ ಹಿಮಾಚ್ಛಾದಿತ ಉತ್ತುಂಗಶಿಖರಗಳನ್ನು ಒಳಗೊಂಡಿದೆ. ಈ ವಲಯ ಹೆಚ್ಚಾಗಿ ಗ್ರಾನೈಟ್ ಮತ್ತು ನೈಸ್ ಶಿಲೆಗಳಿಂದಾಗಿದೆ. ಹೊರ ಹಿಮಾಲಯ ವಲಯ ಕೆಳಹಿಮಾಲಯದಂತಯೇ ಅನೇಕ ಶ್ರೇಣಿಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮುಖ್ಯವಾದವು ಲಡಕ್, ಜಾóನ್ಸ್‍ಕಾರ್ ಮತ್ತು ಕೈಲಾಸ್ ಶ್ರೇಣಿಗಳು. ಈ ವಲಯದ ಸರಾಸರಿ ಅಗಲ 25 ಕಿಮೀ.

	ಸಿಡ್ನಿ ಬುರ್ರಾರ್ಡ್ ಎಂಬಾತ ಹಿಮಾಲಯ ಪ್ರದೇಶವನ್ನು ಅಡ್ಡಡ್ಡವಾಗಿ ಅಸ್ಸಾಮ್ ನೇಪಾಲ್, ಕುಮಾನ್ ಮತ್ತು ಪಂಜಾಬ್ ಭಾಗಗಳೆಂದು ವಿಭಾಗಿಸಿದ್ದಾನೆ. ಪ್ರಪಂಚದ ಆತ್ಯುನ್ನತ ಶ್ರೇಣಿಯಾದ ಹಿಮಾಲಯ ಪರ್ವತ ಟಿಬೆಟ್ ಭೂಭಾಗಕ್ಕೂ ಭಾರತ ಪರ್ಯಾಯ ದ್ವೀಪದ ಭೂಭಾಗಕ್ಕೂ ಮಧ್ಯದಲ್ಲಿದ್ದ ಟಿತಿಸ್‍ಸಾಗರದಲ್ಲಿ ಸುಚಯನಗೊಂಡ ಜಲಜಶಿಲೆಗಳ ಭೂಚಲನೆಗೊಳಪಟ್ಟು ಮುದುಡಿ, ಮಡಚಿ, ಮೇಲೆತ್ತಲ್ಪಟ್ಟದ್ದರಿಂದ ರೂಪು ಗೊಂಡಂಥವು. ಈ ಮಹಾನಿಸರ್ಗಕಾರ್ಯ ನಾಲ್ಕು ಹಂತದಲ್ಲಿ ನಡೆದಿದೆ. ಭೂಚರಿತ್ರೆಯ ಇಯೊಸೀನ್ ಕಾಲದ ಮಧ್ಯಭಾಗದಲ್ಲಿ ಪ್ರಾರಂಭವಾಗಿ ಆಲಿಗೊಸೀನ್ ಕಾಲದಲ್ಲಿ ಪ್ರಬಲಗೊಂಡು ಮಿಯೊಸೀನ್ ಕಾಲದಲ್ಲಿ ಅತಿ ತೀವ್ರಗೊಂಡಿತು. ಮೇಲೆತ್ತುವಿಕೆಯ ಕೊನೆಯ ಹಂತ ಪ್ಲಿಯೊಸೀನ್ ಕಾಲದಲ್ಲಿ ಆದದ್ದು. ಮೂರನೆಯ ಹಂತದ ಬಳಿಕ ಮೊದಲಿನ ತಗ್ಗುಗಳಲ್ಲಿ ಶೇಖರವಾದ ನಿಕ್ಷೇಪಗಳೂ ಮೇಲೆತ್ತಲ್ಪಟ್ಟವು. ಈ ಶಿಲಾರಾಶಿಗೆ ಸಿವಾಲಿಕ್ ಶಿಲಾಸಮುದಾಯ ಎಂದು ಹೆಸರು.

	ನದಿಗಳು: ವಾಯವ್ಯದಲ್ಲಿ ಹಜಾರದಿಂದ ಈಶಾನ್ಯದಲ್ಲಿ ಬೀಸಾದ ಗಡಿಯವರೆಗೆ ಇರುವ ಹಿಮಾಲಯ ಪರ್ವತ ಪ್ರದೇಶದಲ್ಲಿ ಸುಮಾರು 20 ಪ್ರಮುಖ ನದಿಗಳು ಹುಟ್ಟುತ್ತವೆ. ಇವೆಲ್ಲ ಹಿಮಾಲಯ, ಕಾರಕೊರಮ್, ಲಡಕ್, ಜಾóನ್ಸ್‍ಕಾರ್ ಕೈಲಾಸ್ ಮತ್ತು ಹೊರಹಿಮಾಲಯ ಶ್ರೇಣಿಗಳಲ್ಲಿ ಜನಿಸಿ ಅನೇಕ ಪರ್ವತಶ್ರೇಣಿಗಳನ್ನು ಛೇದಿಸಿಕೊಂಡು ದೊಡ್ಡ ಕಂದರಗಳ ಮೂಲಕ ಹಾದು, ಕ್ರಮೇಣ ಸಂಗಮಿಸಿ, ಕೊನೆಯ ಹಂತದಲ್ಲಿ ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದೀಸಮೂಹಗಳಾಗಿ ಪ್ರವಹಿಸುತ್ತವೆ. ಬುರಾರ್ಡ್ ಮತ್ತು ಹೇಡನ್ ಎಂಬ ಸಾಹಸಿಗಳು ಈ ಪ್ರದೇಶಗಳಲ್ಲಿ ಸಂಶೋಧನೆ ನಡೆಸಿ, ಈ ನದಿಗಳ ಬಗ್ಗೆ ಸ್ವಾರಸ್ಯವಾದ ಅನೇಕ ವಿಚಾರ ತಿಳಿಸಿರುವರು.

	ಸಿಂಧೂ (ಸಿಂಧೂ ಎಂದರೆ ಸಮುದ್ರ ಎಂದರ್ಥ) ನದಿ ಪ್ರಪಂಚದ ಪ್ರಬಲ ನದಿಗಳ ಪೈಕಿ ಒಂದು. ಉದ್ದ 2896 ಕಿಮೀ. ತನ್ನ ಉಪನದಿಗಳೊಂದಿಗೆ ಇದು 6,00,200 ಚಕಿಮೀ ಪ್ರದೇಶದಿಂದ ನೀರನ್ನು ಸಂಗ್ರಹಿಸುತ್ತದೆ. ಹೊರ ಹಿಮಾಲಯ ಪ್ರದೇಶದಿಂದ ನೀರನ್ನು ಸಂಗ್ರಹಿಸುತ್ತದೆ. ಹೊರ ಹಿಮಾಲಯ ಪ್ರದೇಶದಲ್ಲಿ 5150 ಮೀ ಎತ್ತರದಲ್ಲಿ ಬೊಖಾರ್‍ಚು ನೀರ್ಗಲ್ಲು ನದಿಯ ಪಾದದಲ್ಲಿ ಜನಿಸುತ್ತದೆ. ಅನೇಕ ಉಪನದಿಗಳು ಇದನ್ನು ಕೂಡುತ್ತವೆ; ಜಾóನ್ಸ್‍ಕಾರ್, ಡ್ರಾನ್, ಶ್ಯಾಕ್ ಶಿಗಾರ್, ಗಿಲ್ಜಿಟ್, ಕಾಬೂಲ್, ಜೀಲಮ್, ರಾವಿ, ಬೀಯಾಸ್ ಮತ್ತು ಸಟ್ಲೆಜ್ ಇವು ಮುಖ್ಯ ಉಪನದಿಗಳು. ಇವುಗಳಲ್ಲಿ ಪಂಜಾಬಿನ ಪಂಚನದಿಗಳೆನಿಸಿಕೊಂಡಿರುವ ಜೀಲಮ್ (ವಿತಸ್ತ), ರಾವಿ (ಪುರೂರ್ನೆ ಅಥವಾ ಐರಾವತಿ), ಬೀಯಾಸ್ (ವಿಪನ ಅಥವಾ ಆರ್ಗಿಕೀಯ), ಚೀನಾಬ್ (ಚಂದ್ರಭಾಗಾ) ಮತ್ತು ಸಟ್ಲೆಜ್ (ಶತದ್ರು ಅಥವಾ ಶತದ್ರಿ) ಪ್ರಮುಖವಾದವು. ಇವು ಮಿಥಿನ್ ಕೋಟೆಯ ಸಮೀಪದಲ್ಲಿ ಸಿಂಧೂ ನದಿಯನ್ನು ಸಂಗಮಿಸುತ್ತವೆ.

	ಗಂಗಾನದಿ ಭಾರತದ ಸಂಸ್ಕøತಿ ವ್ಯಾಪಿಸಿರುವ ಪ್ರದೇಶಗಳೆಲ್ಲ ಮಹಾಪವಿತ್ರ ನದಿಯೆಂದು ಪ್ರಸಿದ್ಧವಾಗಿದೆ. ಇದು ಭಾಗೀರಥೀ ಮತ್ತು ಅಲಕನಂದಾ ನದಿಗಳ ಸಂಗಮದಿಂದಾದುದು. ಭಾಗೀರಥಿಯ ಮೂಲ ಕೇದಾರನಾಥ್‍ಗೆ ಉತ್ತರದಲ್ಲಿರುವ ಗಂಗೋತ್ರಿ ನೀರ್ಗಲ್ಲುನದಿಯ ಒಂದು ಗುಹಾಭಾಗದಲ್ಲಿದೆ. ಅಲಕನಂದಾ ನದಿಥಾಲಿ ಮತ್ತು ಕಾಮೆಟ್ ನದಿಗಳ ಸಂಗಮದಿಂದಾದುದು. ಗಂಗಾನದಿಯ ಉದ್ದ ಒಟ್ಟು 2506 ಕಿಮೀ. ಇದು 63,600 ಚಕಿಮೀ. ಪ್ರದೇಶದಿಂದ ನೀರನ್ನು ಸಂಗ್ರಹಿಸುತ್ತದೆ. ಹೂಗ್ಲಿ, ಭಾಗೀರಥೀ, ಪದ್ಮ ಮುಂತಾದವು ಇದರ ಹಂಚುನದಿಗಳು. ಹಿಮಾಲಯ ಪರ್ವತದ ಹಿಮಾಚ್ಛಾದಿತ ಭಾಗಗಳಿಂದ ಹರಿದು ಬರುವ ಯಮುನ (ಜಮುನ), ರಾಮಗಂಗ, ಕಾಳಿ, ಕರ್ನಾಲಿ, ಗಂಡಕಿ, ಕೋಸೀ (ಕಣ್ಣೀರಿನ ನದಿ) ಮುಂತಾದ ನದಿಗಳೂ ಮಧ್ಯ ಭಾರತದ ಘಟ್ಟ ಪ್ರದೇಶಗಳಲ್ಲಿ ಜನಿಸಿ ಹರಿದು ಬರುವ ಚಂಬಲ್, ಬೆಟ್ಟ ಟೋನ್ಸ್, ಕೇನ್ಸ್ ಸೋನ್ ಮುಂತಾದ ಉಪನದಿಗಳೂ ಗಂಗಾನದಿಯೂ ಸೇರಿ ಹೇರಳವಾಗಿ ಮೆಕ್ಕಲನ್ನು ತಂದು ಹರಡಿ ತಾವು ಹರಿಯುವ ಬಯಲನ್ನು ಪ್ರಪಂಚದ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲೊಂದನ್ನಾಗಿ ಮಾಡಿವೆ.

	ಬ್ರಹ್ಮಪುತ್ರನದಿ ಸಟ್ಲೆಜ್ ಮತ್ತು ಕರ್ನಾಲಿ ನದಿಗಳ ಮೂಲದ ಸಮೀಪದಲ್ಲಿ ಚೇಮಾಯುಂಗ್‍ಡುಂಗ್ ನೀರ್ಗಲ್ಲುನದಿಯಿಂದ ಜನಿಸಿ, ಲಡಕ್ ಶ್ರೇಣಿಯ ತಪ್ಪಲಿನಲ್ಲಿ ಪ್ರವಹಿಸುತ್ತದೆ. ಟಿಬೆಟ್ ಪ್ರದೇಶದಲ್ಲಿ ಇದಕ್ಕೆ ಟ್ಸಾಂಗ್‍ಪೊ ಎಂದು ಹೆಸರು. ದಿಹಾಂಗ್ ಎಂಬ ಹೆಸರಿನಿಂದ ಉತ್ತರ ಅಸ್ಸಾಮ್ ಪ್ರದೇಶದಲ್ಲಿ ಹರದು, ಸೆಸ್ರಿ ದಿ ಬಾಂಗ್ ಮತ್ತು ನೋವಾದಿಹಿಂಗ್ ಉಪನದಿಗಳನ್ನು ಕೂಡಿದ ಮೇಲೆ ಬ್ರಹ್ಮಪುತ್ರ ಎಂಬ ಹೆಸರಿನಿಂದ ಪ್ರವಹಿಸುತ್ತವೆ. ಸುಬಸ್ಸಿರಿ, ಭರೇಲಿ, ಉತ್ತರ ಧಾನ್ಸಿರಿ, ಮಾನಸ್, ರೆಯಾಡ್ಡಿಕ್, ಭೂರಿದಿಹಿಂಗ್ ಡಿಸ್ಯಾಂಗ್, ದಕ್ಷಿಣ ಧಾನ್ಸಿರಿ ಮತ್ತು ಶಿಸ್ತ (ತೃಷ್ಣ)-ಇವು ಇದರ ಮುಖ್ಯ ಉಪನದಿಗಳು. ರಾಜಮಹಲ್ ಬೆಟ್ಟಗಳನ್ನು ದಾಟಿ ಮುಂದೆ ಜಮುನ ಎಂಬ ಹೆಸರಿನಿಂದ ಹರಿದು, ಗಂಗಾನದಿಯನ್ನು ಸಂಗಮಿಸುತ್ತದೆ. ಇದರ ಒಟ್ಟು ಉದ್ದ 2880ಕಿಮೀ. 5,77,920 ಚಕಿಮೀ ಪ್ರದೇಶದಿಂದ ನೀರು ಸಂಗ್ರಹಿಸುತ್ತದೆ.

	ಪರ್ಯಾಯ ದ್ವೀಪಭಾಗದಲ್ಲಿ ಹರಿಯುವ ನದಿಗಳಿಗೂ ಭಾರತದ ಇತರ ನದಿಗಳಿಗೂ ಬಹಳ ವ್ಯತ್ಯಾಸವಿದೆ. ಪರ್ಯಾಯ ದ್ವೀಪಾಂತರ ನದಿಗಳು ಅತಿ ಪ್ರಬಲವಾದವು. ಅವು ಬಹಳ ಪ್ರಾಚೀನದಲ್ಲೇ ತಮ್ಮ ಪಾತ್ರಗಳನ್ನು ಬದಲಾಯಿಸಿವೆ. ವೇದಗಳ ಕಾಲದಲ್ಲಿ ಗಂಗಾ, ಸಿಂಧೂ ನದಿಗಳಿಗಿಂತ ಅಧಿಕ ಪ್ರಾಮುಖ್ಯ ಪಡೆದಿದ್ದ ಸರಸ್ವತೀ ನದಿ ಮಹಾಭಾರತದ ಕಾಲದ ವೇಳೆಗೆ ಶೋಷಿಸಿ ಹೋಗಿ ಅನಂತರ ಗುಪ್ತ ಗಾಮಿನಿಯೆಂದು ಹೆಸರು ಪಡೆದಿದೆ.

	ನೀರ್ಗಲ್ಲು ನದಿಗಳು (ಗ್ಲೇಷಿಯರ್ಸ್): ಹಿಮಾಲಯ ಪರ್ವತದಲ್ಲಿ ಅಲ್ಪ್ಸ್ ಪರ್ವತದಲ್ಲಿರುವುದಕ್ಕಿಂತ ಹೆಚ್ಚು ಸಂಖ್ಯೆಯ ಮತ್ತು ಹೆಚ್ಚು ಉದ್ದವಾಗಿರುವ ನೀರ್ಗಲ್ಲು ನದಿಗಳಿವೆ. ಇವುಗಳ ಉದ್ದ 2 ಕಿಮೀ ನಿಂದ 80 ಕಿಮೀಗಳಷ್ಟಿದೆ. ಟ್ರಾನ್ಸ್ ಆಲ್ವೈನಲ್ಲಿರುವ ಫೆಡಂಕೊ (76.4 ಕಿಮೀ) ಮತ್ತು ಕುಮಾನ್ ಹಿಮಾಲಯದಲ್ಲಿರುವ ಗಂಗೋತ್ರಿ (25.6 ಕಿಮೀ) ಇವುಗಳಲ್ಲಿ ಮುಖ್ಯವಾದವು.

	ಸರೋವರಗಳು: ಇಲ್ಲಿಯ ಸರೋವರಗಳು ಭೂಮಿಯ ಮೇಲ್ಪದರದ ಚಲನೆಯಿಂದಾದವು. ಟಿಬೆಟ್ ಪ್ರಸ್ಥಭೂಮಿಯಲ್ಲಿ ಹೆಚ್ಚಿನ ಸಂಖ್ಯೆಯ ಸರೋವರಗಳಿವೆ. ಇದರಲ್ಲಿ ಟಿಯನ್‍ಷಾನ್ ಪ್ರದೇಶದಲ್ಲಿರುವ ಇಸ್ಸಿಕ್‍ಕಾಲ್ (3219 ಚ ಕಿಮೀ) ಅತ್ಯಂತ ವಿಶಾಲವಾದದ್ದು. ಇದಲೇ ಪ್ರದೇಶದಲ್ಲಿರುವ ಕೋಕೊನೊರ್ (2623 ಚಕಿಮೀ), ಮಾನಸ ಸರೋವರ (322 ಚಕಿಮೀ). ರಖನ್‍ಚಾಲ್ (225 ಚಕಿಮೀ), ಗುಂಚು (650 ಚಕಿಮೀ), ಯಾಮ್ ಡ್ರೋಕ್ (541 ಚಕಿಮೀ) ಸರೋವರಗಳು ಪರ್ಯಾಯ ದ್ವೀಪಾಂತರ ಪ್ರದೇಶದ ಪ್ರಮುಖ ಸರೋವರಗಳು.

	ಭೂಕಂಪನಗಳು: ಈ ಪ್ರದೇಶದಲ್ಲಿ ಹೇರಳವಾಗಿ ಭೂಕಂಪನಗಳಾಗುತ್ತವೆ. ಈಶಾನ್ಯದಲ್ಲಿ ಸಾವಿಯ ಪ್ರದೇಶದಿಂದ ಚೀನದ ಎಲ್ಲೆಯವರೆಗೂ ವಾಯವ್ಯದಲ್ಲಿ ಕಾಶ್ಮೀರ, ಗಿಲ್ಜಿಟ್ ಮತ್ತು ಪಾವಿರ್ ಭಾಗಗಳು, ಸುಲೇಮಾನ್ ಶ್ರೇಣಿಯ ಉತ್ತರ ಕೊನೆಯ ಭಾಗಗಳು ಆಗಾಗ್ಗೆ ಕಂಪನಕ್ಕೊಳಗಾಗುತ್ತವೆ. ಈಚೆಗೆ ಒಂದೆರಡು ಶತಮಾನಗಳಲ್ಲಿಯೇ ಆತ್ಯಂತ ತೀವ್ರವಾದ ಭೂಕಂಪನಗಳಾಗಿವೆ. 1828ರ ಕಾಶ್ಮೀರ ಭೂಕಂಪನ. 1839ರ ಬರ್ಮ ಭೂಕಂಪನ, 1897ರ ಅಸ್ಸಾಮ್ ಭೂಕಂಪನ, 1905ರ ಕಾಂಗರು ಭೂಕಂಪನ, 1935ರ ಕ್ವೆಟ್ಟ ಭೂಕಂಪನ, 1950ರ ಅಸ್ಸಾಮ್ ಭೂಕಂಪನ, 1967ರ ಕೊಯ್ನ ಭೂಕಂಪನ 1975ರ ಹಿಮಾಚಲ ಪ್ರದೇಶದ ಭೂಕಂಪನ-ಇವು ಈಚಿನ ಕೆಲವು ಮುಖ್ಯ ಭೂಕಂಪನಗಳು.

	ಶಿಲಾಚರಿತ್ರೆ ಮತ್ತು ಶಿಲಾರಚನೆ: (ನೋಡಿ- ಭಾರತದ ಶಿಲಾಚರಿತ್ರೆ ಮತ್ತು ಶಿಲಾರಚನೆ. ) 												
	(ಎಸ್. ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ